ನಟಿ ಹಾಗೂ ನೃತ್ಯಗಾರ್ತಿ ನೋರಾ ಫತೇಹಿ ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಎದುರಿಸಿದ ಸಂಕಷ್ಟಗಳ ಕುರಿತು ಬಹಿರಂಗಪಡಿಸಿದ್ದಾರೆ. ಕೆಲಸದ ಅವಕಾಶಗಳನ್ನು ಒದಗಿಸುವುದಾಗಿ ಹೇಳಿ ಸುಮಾರು 20 ಲಕ್ಷ ರೂಪಾಯಿ ವಂಚನೆಗೆ ಒಳಗಾಗಿದ್ದಾಗಿ ಹಾಗೂ ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ನಿರ್ಮಿಸಿಕೊಳ್ಳಲು ಹಲವಾರು ಹಾಡುಗಳು ಮತ್ತು ಯೋಜನೆಗಳಲ್ಲಿ ಯಾವುದೇ ಸಂಭಾವನೆ ಪಡೆಯದೆ ಕೆಲಸ ಮಾಡಬೇಕಾಯಿತು ಎಂದು ತಿಳಿಸಿದ್ದಾರೆ.
ಭಾರತೀಯ ಸಿನಿರಂಗದಲ್ಲಿ ತಮ್ಮ ನೃತ್ಯ ಪ್ರದರ್ಶನಗಳು ಮತ್ತು ಪರದೆಯ ಮೇಲಿನ ಉಪಸ್ಥಿತಿಯಿಂದ ಗುರುತಿಸಿಕೊಂಡಿರುವ ನೋರಾ ಫತೇಹಿಯ ವೃತ್ತಿಜೀವನದ ಪಯಣ ಹಲವು ಸವಾಲುಗಳು, ಆರ್ಥಿಕ ಸಂಕಷ್ಟಗಳು ಮತ್ತು ನಿರಾಕರಣೆಗಳಿಂದ ಕೂಡಿತ್ತು. ಒಂದು ಸಂದರ್ಶನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಅವರು, ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಸುಮಾರು 20 ಲಕ್ಷ ರೂಪಾಯಿ ಆರ್ಥಿಕ ನಷ್ಟವನ್ನು ಎದುರಿಸಿದ್ದಾಗಿ ಹೇಳಿದ್ದಾರೆ.
2014ರಲ್ಲಿ ಕೆನಡಾದಿಂದ ಭಾರತಕ್ಕೆ ಬಂದ ನೋರಾ, ಬಾಲಿವುಡ್ನಲ್ಲಿ ವೃತ್ತಿಜೀವನ ನಿರ್ಮಿಸಿಕೊಳ್ಳುವ ಉದ್ದೇಶದಿಂದ ಮುಂಬೈಗೆ ಆಗಮಿಸಿದರು. ಆ ಸಮಯದಲ್ಲಿ ಅವರ ಬಳಿ ಸುಮಾರು 5,000 ರೂಪಾಯಿ ಮಾತ್ರ ಇತ್ತು ಎಂದು ತಿಳಿಸಿದ್ದಾರೆ. ಮುಂಬೈಗೆ ಬಂದ ನಂತರ ಅವರು ಹಲವು ಯುವತಿಯರೊಂದಿಗೆ ಒಂದು ಸಣ್ಣ ಅಪಾರ್ಟ್ಮೆಂಟ್ನಲ್ಲಿ ವಾಸಿಸಬೇಕಾಯಿತು. ಚಿತ್ರರಂಗದ ಕಾರ್ಯವೈಖರಿ, ಭಾಷೆ, ಸಂಸ್ಕೃತಿ ಮತ್ತು ವೃತ್ತಿಪರ ವಾತಾವರಣ ಎಲ್ಲವೂ ಅವರಿಗೆ ಹೊಸದಾಗಿತ್ತು.
ನೋರಾ ಸಂಪ್ರದಾಯವಾದಿ ಕುಟುಂಬದಲ್ಲಿ ಜನಿಸಿದ್ದರು. ಅವರ ಕುಟುಂಬದಲ್ಲಿ ನೃತ್ಯದ ಬಗ್ಗೆ ಕಟ್ಟುನಿಟ್ಟಿನ ನಿರ್ಬಂಧಗಳಿದ್ದವು ಎಂದು ಅವರು ಹೇಳಿದ್ದಾರೆ. ಬಾಲ್ಯದಿಂದಲೇ ನೃತ್ಯದ ಮೇಲೆ ಆಸಕ್ತಿ ಹೊಂದಿದ್ದ ಅವರು, ಬಹುತೇಕ ಸಮಯದಲ್ಲಿ ರಹಸ್ಯವಾಗಿ ಅಭ್ಯಾಸ ಮಾಡುತ್ತಿದ್ದರು. ಒಂದು ಬಾರಿ ಅವರ ತಾಯಿ ಅವರು ನೃತ್ಯ ಮಾಡುತ್ತಿರುವುದನ್ನು ಕಂಡು ಕಠಿಣ ಪ್ರತಿಕ್ರಿಯೆ ನೀಡಿದ್ದರೆಂದು ಅವರು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಅವರು ನೃತ್ಯವನ್ನು ಬಿಟ್ಟುಕೊಡದೆ ವೀಡಿಯೊಗಳನ್ನು ನೋಡಿ ವಿವಿಧ ನೃತ್ಯ ಶೈಲಿಗಳನ್ನು ಸ್ವತಃ ಕಲಿಯುತ್ತಿದ್ದರು.
ಮುಂಬೈಗೆ ಬಂದ ನಂತರ ಅವರಿಗೆ ಎದುರಾದ ದೊಡ್ಡ ಸವಾಲು ಹಿಂದಿ ಭಾಷೆಯಾಗಿತ್ತು. ಹಿಂದಿ ಭಾಷೆ ತಿಳಿಯದ ಕಾರಣ ಅನೇಕ ಆಡಿಷನ್ಗಳಲ್ಲಿ ಅವರು ತಿರಸ್ಕೃತರಾದರು. ಕೆಲ ಸಂದರ್ಭಗಳಲ್ಲಿ ಅವರ ಉಚ್ಚಾರಣೆ ಮತ್ತು ಆಕ್ಸೆಂಟ್ನನ್ನೂ ಹಾಸ್ಯ ಮಾಡಲಾಗಿತ್ತು. ಇದ್ರೂ ಅವರು ಹಿಂದೆ ಸರಿಯದೆ ಹಿಂದಿ ಕಲಿಯಲು ಹಾಗೂ ತಮ್ಮನ್ನು ತಾವು ಅಭಿವೃದ್ಧಿಪಡಿಸಿಕೊಳ್ಳಲು ನಿರಂತರ ಪ್ರಯತ್ನ ಮುಂದುವರಿಸಿದರು.
ಆರಂಭಿಕ ದಿನಗಳಲ್ಲಿ ಅವರ ಆರ್ಥಿಕ ಪರಿಸ್ಥಿತಿ ತುಂಬಾ ದುರ್ಬಲವಾಗಿತ್ತು. ಜೀವನ ನಿರ್ವಹಣೆಗೆ ಅವರು ಕಾಫಿ ಅಂಗಡಿಯಲ್ಲಿ ವೇಟರ್ ಆಗಿ ಕೆಲಸ ಮಾಡಿದ್ದು, ಲಾಟರಿ ಟಿಕೆಟ್ಗಳನ್ನೂ ಮಾರಾಟ ಮಾಡಿದ್ದರು. ಕೆಲವು ಸಂದರ್ಭಗಳಲ್ಲಿ ಒಂದು ವಾರಕ್ಕೆ ಕೇವಲ ಸುಮಾರು 3,000 ರೂಪಾಯಿ ಮಾತ್ರ ಸಿಗುತ್ತಿತ್ತು ಎಂದು ಅವರು ಹೇಳಿದ್ದಾರೆ. ಅನೇಕ ದಿನಗಳ ಕಾಲ ಬ್ರೆಡ್ ಮತ್ತು ಮೊಟ್ಟೆಗಳನ್ನು ಮಾತ್ರ ಸೇವಿಸಿ ದಿನ ಕಳೆಯಬೇಕಾಗಿತ್ತು ಎಂದು ತಿಳಿಸಿದ್ದಾರೆ.
ತಮ್ಮ ವೃತ್ತಿಜೀವನದ ಆರಂಭದಲ್ಲಿ ಒಂದು ಏಜೆನ್ಸಿ ಕೆಲಸದ ಅವಕಾಶಗಳನ್ನು ಒದಗಿಸುವುದಾಗಿ ಭರವಸೆ ನೀಡಿತ್ತು ಎಂದು ನೋರಾ ಹೇಳಿದ್ದಾರೆ. ಆ ನಂಬಿಕೆಯಿಂದ ಅವರು ಒಂದು ಜಾಹೀರಾತಿನಿಂದ ಗಳಿಸಿದ್ದ ಸುಮಾರು 20 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದ್ದರು. ನಂತರ ಏಜೆನ್ಸಿಯ ವರ್ತನೆ ಬದಲಾಗಿದ್ದು, ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ನಿರಾಕರಿಸಲಾಯಿತು ಎಂದು ಅವರು ತಿಳಿಸಿದ್ದಾರೆ. ಈ ಘಟನೆ ಅವರ ಆರಂಭಿಕ ವೃತ್ತಿಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರಿತು.
2015ರಲ್ಲಿ ನೋರಾಗೆ ರಿಯಾಲಿಟಿ ಶೋ ‘ಬಿಗ್ ಬಾಸ್ 9’ ನಲ್ಲಿ ಭಾಗವಹಿಸುವ ಅವಕಾಶ ದೊರೆಯಿತು. ಅವರು ಕಾರ್ಯಕ್ರಮದಲ್ಲಿ ಹೆಚ್ಚು ಕಾಲ ಉಳಿಯದಿದ್ದರೂ, ಇದೇ ಕಾರ್ಯಕ್ರಮದ ಮೂಲಕ ಭಾರತೀಯ ಪ್ರೇಕ್ಷಕರ ನಡುವೆ ಅವರ ಗುರುತು ಮೂಡತೊಡಗಿತು. ಬಳಿಕ ಅವರಿಗೆ ಸಿನಿಮಾಗಳು ಮತ್ತು ನೃತ್ಯ ಪ್ರದರ್ಶನಗಳಲ್ಲಿ ನಿರಂತರ ಅವಕಾಶಗಳು ದೊರೆಯಲಾರಂಭಿಸಿತು.
2014ರಲ್ಲಿ ಬಿಡುಗಡೆಯಾದ ‘ರೋರ್: ಟೈಗರ್ಸ್ ಆಫ್ ದಿ ಸುಂದರ್ಬನ್ಸ್’ ಚಿತ್ರದ ಮೂಲಕ ನೋರಾ ಬಾಲಿವುಡ್ಗೆ ಪದಾರ್ಪಣೆ ಮಾಡಿದರು. ನಂತರ ಅವರು ದಕ್ಷಿಣ ಭಾರತೀಯ ಚಿತ್ರರಂಗದ ಹಲವು ಯೋಜನೆಗಳ ಭಾಗವಾದರು. ‘ಬಾಹುಬಲಿ’ ಚಿತ್ರದ ‘ಮನೋಹರಿ’ ಹಾಡಿನಲ್ಲಿಯೂ ಅವರು ಕಾಣಿಸಿಕೊಂಡಿದ್ದು, ಇದರಿಂದ ಅವರಿಗೆ ಮತ್ತಷ್ಟು ಗುರುತು ದೊರೆಯಿತು.
2018ರಲ್ಲಿ ಬಿಡುಗಡೆಯಾದ ‘ಸತ್ಯಮೇವ ಜಯತೆ’ ಚಿತ್ರದ ‘ದಿಲ್ಬರ್’ ಹಾಡು ನೋರಾ ಅವರ ವೃತ್ತಿಜೀವನದ ಪ್ರಮುಖ ತಿರುವಾಗಿ ಪರಿಣಮಿಸಿತು. ಹಾಡಿನ ಯಶಸ್ಸಿನ ನಂತರ ಅವರು ದೇಶಾದ್ಯಂತ ‘ದಿಲ್ಬರ್ ಗರ್ಲ್’ ಎಂದು ಗುರುತಿಸಲ್ಪಟ್ಟರು. ಬಳಿಕ ಅವರು ಬಾಲಿವುಡ್ನ ಪ್ರಮುಖ ನೃತ್ಯ ಕಲಾವಿದರಲ್ಲೊಬ್ಬರಾಗಿ ಪರಿಗಣಿಸಲ್ಪಟ್ಟರು.
ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅನೇಕ ಹಾಡುಗಳು ಮತ್ತು ಯೋಜನೆಗಳಲ್ಲಿ ಯಾವುದೇ ಸಂಭಾವನೆ ಪಡೆಯದೆ ಕೆಲಸ ಮಾಡಿದ್ದಾಗಿ ನೋರಾ ಹೇಳಿದ್ದಾರೆ. ಆ ಸಮಯದಲ್ಲಿ ಹಣಕ್ಕಿಂತ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವುದು ಮತ್ತು ಚಿತ್ರರಂಗದಲ್ಲಿ ಸ್ಥಾನ ಗಳಿಸುವುದೇ ಮುಖ್ಯ ಉದ್ದೇಶವಾಗಿತ್ತು ಎಂದು ಅವರು ತಿಳಿಸಿದ್ದಾರೆ.
‘ದಿಲ್ಬರ್’ ನಂತರ ಅವರು ‘ಕಮರಿಯಾ’, ‘ಓ ಸಾಕಿ ಸಾಕಿ’ ಮತ್ತು ‘ಗರ್ಮಿ’ ಸೇರಿದಂತೆ ಹಲವು ಜನಪ್ರಿಯ ಹಾಡುಗಳಲ್ಲಿ ಕಾಣಿಸಿಕೊಂಡರು. ಈ ಹಾಡುಗಳು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿವೆ.
ಇತ್ತೀಚೆಗೆ ಒಂದು ಚಿತ್ರದ ‘ಸರ್ಕೇ ಚುನರ್ ತೇರಿ ಸರ್ಕೇ’ ಹಾಡಿಗೆ ಸಂಬಂಧಿಸಿದ ವಿವಾದದಲ್ಲೂ ನೋರಾ ಹೆಸರು ಕೇಳಿಬಂದಿತ್ತು. ಹಾಡಿನ ನಿರೂಪಣೆಯ ಬಗ್ಗೆ ಆಕ್ಷೇಪಣೆಗಳು ವ್ಯಕ್ತವಾಗಿದ್ದು, ವಿಷಯ ರಾಷ್ಟ್ರೀಯ ಮಹಿಳಾ ಆಯೋಗದವರೆಗೆ ತಲುಪಿತ್ತು.
ವಿಚಾರಣೆಯ ವೇಳೆ ನೋರಾ ಲಿಖಿತ ಕ್ಷಮೆಯಾಚನೆ ಸಲ್ಲಿಸಿ, ಯಾರ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶ ತಮ್ಮದಲ್ಲ ಎಂದು ತಿಳಿಸಿದ್ದಾರೆ. ಕಲಾವಿದೆಯಾಗಿ ತಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಅರ್ಥಮಾಡಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.
‘ದಿಲ್ಬರ್’ ಹಾಡಿನ ಯಶಸ್ಸಿನ ನಂತರ ತಮಗೆ ದೀರ್ಘಕಾಲ ಕೇವಲ ನೃತ್ಯ ಹಾಡುಗಳ ಕಲಾವಿದೆಯೆಂಬ ಗುರುತು ಮಾತ್ರ ಸಿಕ್ಕಿತ್ತು ಎಂದು ನೋರಾ ಹೇಳಿದ್ದಾರೆ. ಆದರೆ ಅವರು ನಟನೆಯಲ್ಲಿಯೂ ಅವಕಾಶಗಳನ್ನು ಬಯಸಿದ್ದು, ಆಡಿಷನ್ಗಳನ್ನು ನೀಡುತ್ತಲೇ ಇದ್ದರು. ಬಳಿಕ ನಿಧಾನವಾಗಿ ಅವರಿಗೆ ನಟನೆಯೊಂದಿಗೆ ಸಂಬಂಧಿಸಿದ ಯೋಜನೆಗಳಲ್ಲಿಯೂ ಅವಕಾಶಗಳು ದೊರಕಿದವು.
ಕೆನಡಾದಿಂದ ಮುಂಬೈವರೆಗಿನ ಅವರ ಪಯಣ ಆರ್ಥಿಕ ಸಂಕಷ್ಟಗಳು, ವಂಚನೆ, ನಿರಾಕರಣೆಗಳು ಮತ್ತು ನಿರಂತರ ಹೋರಾಟಗಳಿಂದ ಕೂಡಿತ್ತು. ಈ ಎಲ್ಲ ಸವಾಲುಗಳ ನಡುವೆಯೂ ನೋರಾ ಫತೇಹಿ ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ.






