ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ 24 ಮೇ 2026ರಂದು ದೇಶದಾದ್ಯಂತ ನಡೆಯಲಿರುವ ಸಿವಿಲ್ ಸರ್ವಿಸ್ ಪ್ರಿಲಿಮಿನರಿ ಪರೀಕ್ಷೆ (UPSC CSE Prelims 2026)ಗಾಗಿ ಪ್ರವೇಶ ಪತ್ರಗಳನ್ನು ಬಿಡುಗಡೆ ಮಾಡಿದೆ. ಈ ವರ್ಷ UPSC ಸಿವಿಲ್ ಸರ್ವಿಸ್ ಪರೀಕ್ಷೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇದೀಗ ಅಧಿಕೃತ ವೆಬ್ಸೈಟ್ ಮೂಲಕ ತಮ್ಮ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಈ ವರ್ಷ ಒಟ್ಟು 933 ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಆಯೋಗ ಆರಂಭಿಸಿದೆ. ಭಾರತೀಯ ಆಡಳಿತ ಸೇವೆ (IAS), ಭಾರತೀಯ ಪೊಲೀಸ್ ಸೇವೆ (IPS), ಭಾರತೀಯ ಅರಣ್ಯ ಸೇವೆ (IFS) ಸೇರಿದಂತೆ ಇತರೆ ಕೇಂದ್ರ ಸೇವೆಗಳ ನೇಮಕಾತಿಗಾಗಿ ನಡೆಯುವ ಈ ಪರೀಕ್ಷೆಯನ್ನು ದೇಶದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದು ಎಂದು ಪರಿಗಣಿಸಲಾಗಿದೆ.
UPSC ಪ್ರಿಲಿಮ್ಸ್ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರ ಕಡ್ಡಾಯ ದಾಖಲೆ ಆಗಿದೆ. ಮಾನ್ಯ ಪ್ರವೇಶ ಪತ್ರವಿಲ್ಲದೆ ಯಾವುದೇ ಅಭ್ಯರ್ಥಿಗೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡಲಾಗುವುದಿಲ್ಲ. ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಹೆಸರು, ರೋಲ್ ನಂಬರ್, ಪರೀಕ್ಷಾ ಕೇಂದ್ರ, ವರದಿ ಸಮಯ ಮತ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಮುಖ ಸೂಚನೆಗಳು ನೀಡಲಾಗಿವೆ.
ಪರೀಕ್ಷೆಗೆ ಮುನ್ನ ಪ್ರವೇಶ ಪತ್ರದಲ್ಲಿರುವ ಎಲ್ಲಾ ಮಾಹಿತಿಯನ್ನು ಅಭ್ಯರ್ಥಿಗಳು ಎಚ್ಚರಿಕೆಯಿಂದ ಪರಿಶೀಲಿಸುವಂತೆ ಆಯೋಗ ಸೂಚಿಸಿದೆ. ಯಾವುದೇ ರೀತಿಯ ದೋಷ ಕಂಡುಬಂದರೆ ತಕ್ಷಣ UPSC ಅನ್ನು ಸಂಪರ್ಕಿಸಲು ತಿಳಿಸಲಾಗಿದೆ.
ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ “Admit Card” ವಿಭಾಗವನ್ನು ಆಯ್ಕೆ ಮಾಡಿ UPSC Civil Services Preliminary Examination 2026 ಲಿಂಕ್ ಮೇಲೆ ಕ್ಲಿಕ್ ಮಾಡುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಬಹುದು. ನಂತರ Mobile Number & OTP, URN & Password ಅಥವಾ Email ID & Password ಆಯ್ಕೆಗಳ ಮೂಲಕ ಲಾಗಿನ್ ಮಾಡಿ Sign In ಮಾಡಬೇಕಾಗುತ್ತದೆ. ಲಾಗಿನ್ ಆದ ಬಳಿಕ ಪರದೆಯ ಮೇಲೆ ಕಾಣಿಸುವ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಬಹುದು.
ಪ್ರವೇಶ ಪತ್ರವು UPSC Portal, UPSC Online ಹಾಗೂ UPSC NIC Portal ಮೂಲಕವೂ ಲಭ್ಯವಿದೆ ಎಂದು ಆಯೋಗ ತಿಳಿಸಿದೆ.
ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪತ್ರದ ಜೊತೆಗೆ ಮಾನ್ಯ ಫೋಟೋ ಗುರುತಿನ ಚೀಟಿಯನ್ನು ಕೂಡ ಕಡ್ಡಾಯವಾಗಿ ತರಬೇಕು ಎಂದು UPSC ಸ್ಪಷ್ಟಪಡಿಸಿದೆ.







